ಕೆರೆಯ ಪದ್ಮರಸ:-

ಕವಿಯಾಗಿ, ಮಂತ್ರಿಯಾಗಿ, ವಿದ್ವಾಂಸನಾಗಿ, ವಿರಕ್ತನಾಗಿ, ಪರೋಪಕಾರಿಯಾಗಿ ಪ್ರಸಿದ್ಧನಾಗಿರುವ ಈತ ಹರಿಹರ ರಾಘವಾಂಕರ ಸಮಕಾಲೀನ, ಈತನ ಕಾಲದ ಬಗ್ಗೆ ವಿದ್ವಾಂಸರಲ್ಲಿ ವಿಪುಲ ಚರ್ಚೆ ನಡೆದಿದೆ. ಹರಿಹರ, ಕೆರೆಯ ಪದ್ಮರಸರಿಬ್ಬರೂ ಹೊಯ್ಸಳ ನರಸಿಂಹ ಬಲ್ಲಾಳನ ಆಸ್ಥಾನದಲ್ಲಿದ್ದುದಾಗಿ ತಿಳಿದು ಬಂದಿದೆ. ಬಹುಜನ ವಿದ್ವಾಂಸರ ಆಭಿಪ್ರಾಯದಂತೆ ಈತ 13ನೆಯ ಶತಮಾನದ ಪೂರ್ವಾರ್ಧದಲ್ಲಿದ್ದಂತೆ ಸದ್ಯಕ್ಕೆ ತಿಳಿಯಬಹುದು.

ಸಕಲಶಾಬ್ದಿಕಸಾರ್ವಭೌಮ, ಉದ್ಧತವಾದಿನಿಕರವೇಶ್ಯಾಭುಜಂಗ, ತಾರ್ಕಿಕ ಚಕ್ರವರ್ತಿ, ಶಿವಾದ್ವೈತಸಾಕಾರಸಿದ್ಧಾಂತ ಪ್ರತಿಷ್ಠಾಪನಾಚಾರ್ಯ, ಶರಣಕವಿ, ಭವಿದೂರ-ಎಂಬ ಬಿರುದುಗಳನ್ನು ಪಡೆದು, ತ್ರಿಭುವನತಾತನನ್ನು ವಾದದಲ್ಲಿ ಸೋಲಿಸಿ, ಬೇಲೂರಿನಲ್ಲಿ ಕೆರೆಯನ್ನು ಕಟ್ಟಿಸಿ, ಉಭಯಭಾಷಾಪಂಡಿತನೂ ಚತುಶ್ಯಾಸ್ತ್ರಕೋವಿದನೂ ವೀರಶೈವಾಗಮಪಾರಂಗತನೂ ಕವಿಯೂ ಕಲಿಯೂ ಎನಿಸಿ, ಅತ್ಯಂತ ಪ್ರಭಾವಶಾಲಿಯಾಗಿದ್ದ ಕೆರೆಯ ಪದ್ಮರಸ ಉಜ್ಜ್ವಲ ಗುರುವಂಶವೊಂದರಲ್ಲಿ ಜನ್ಮ ತಾಳಿದ ಪುಣ್ಯಶಾಲಿ. ಈತನ ಮುತ್ತಜ್ಜನಾದ ಶಿವಯೋಗಿ ಮಲ್ಲಿಕಾರ್ಜುನ ಪಂಡಿತ (ಮಲ್ಲರಸ) ಕರ್ಣಾಟಕದ ಕಲ್ಲುಕುರಿಕೆಯಲ್ಲಿ ದೊರೆಯಾಗಿದ್ದನಂತೆ. ಮಲ್ಲರಸನ ಮಗನೇ ವಚನಕಾರ ಸಕಲೇಶ ಮಾದರಸ. ಇವರಿಬ್ಬರೂ ವಿರಕ್ತರಾಗಿ ಶ್ರೀಶೈಲಕ್ಕೆ ಹೋದರಂತೆ. ಸಕಲೇಶ ಮಾದರಸ ಶ್ರೀಶೈಲಕ್ಕೆ ಹೋಗುವಾಗ ದಾರಿಯಲ್ಲಿ ಶಿಷ್ಯರ ಪ್ರಾರ್ಥನೆಯಂತೆ ಅಂಬೆ ಎಂಬ ಊರಿನಲ್ಲಿ ಕೆಲಕಾಲ ತಂಗಿದ್ದು ಬಳಿಕ ಶ್ರೀಶೈಲಕ್ಕೆ ಹೋಗಿ ತಂದೆಯನ್ನು ಕಂಡಾಗ ಆತ ಮಾದರಸನನ್ನು ಇನ್ನೂ ಐವತ್ತು ವರ್ಷ ಭೂಲೋಕದಲ್ಲಿದ್ದು ಧರ್ಮಸಂಸ್ಥಾಪನಾರ್ಥವಾಗಿ ಬರುವ ಬಸವನೊಡನೆ ಕಾಲಕಳೆಯಲು ಹೇಳಿ ಮರಳಿ ಕಳುಹಿದನಂತೆ. ಇವನ ಮಗ ಮಾಯಿದೇವ ಅಂಬೆಯಲ್ಲಿದ್ದ. ಇವನಿಗೆ ನರಸಿಂಹಬಲ್ಲಾಳನ ದಂಡನಾಯಕನಾದ ಕಮ್ಮವಲ್ಲಭ ಗೌರಪನ ಅಕ್ಕ ಮಂಗಲೆಯನ್ನು ಕೊಟ್ಟು ಮದುವೆಯಾಗಿತ್ತು.ಇವರ ಮಗನೇ ಕೆರೆಯ ಪದ್ಮರಸ. ಇವನ ಹೆಂಡತಿ ದಂಡನಾಯಕ ಗೌರಪನ ಮಗಳಾದ ಮಾದೇವಿ. ಗೌರಪನ ಕಾಲಾನಂತರ ನರಸಿಂಹ ಬಲ್ಲಾಳ ಕೆರೆಯ ಪದ್ಮರಸನಿಗೆ ದಂಡೇಶ ಪದವಿಯನ್ನಿತ್ತು ಮಂತ್ರಿಯನ್ನಾಗಿ ಮಾಡಿಕೊಂಡ.

ತಮ್ಮ ಬಗ್ಗೆ ಕಾವ್ಯಗಳನ್ನು ಬರೆಸಿಕೊಂಡ ಕೆಲವೇ ಕವಿಗಳಲ್ಲಿ ಕೆರೆಯ ಪದ್ಮರಸ ಒಬ್ಬ. ಇವನ ವಂಶಜನಾದ ಪದ್ಮಣಾಂಕನೇ ಪದ್ಮರಾಜ ಪುರಾಣವನ್ನು ಬರೆದು ಕೆರೆಯ ಪದ್ಮರಸನ ಬಹುಮುಖವೂ ಪ್ರಭಾವಪೂರ್ಣವೂ ಆದ ವ್ಯಕ್ತಿತ್ವವನ್ನು ಚಿತ್ರಿಸಿರುವುದು ಇನ್ನೂ ಗಮನಾರ್ಹವಾಗಿದೆ. ಪದ್ಮಣಾಂಕ ಕಂಡ ಪದ್ಮರಸನ ವ್ಯಕ್ತಿ ಚಿತ್ರವಿದು:

ಪರಮಭಕ್ತಿಗೆ ಶಿವಮೊದವಿತೊ ಶಾಂತಿಗೆ ಮುಖಂ
ಸ್ಫುರಿಸಿತೋ ಶಿವನ ದಾನಾಭಯದ ಗುಣಯುಗಕೆ
ಕರಮಮರ್ದುವೋ ಚಿದ್ವಿಲಾಸಕೆರ್ದೆ ರಾಜಿಸಿತೊ ಸಂಚರಿತಕೆ ಕಾಲ್‍ಬಂದುವೋ
ಇರದಖಿಳ ಲೋಕವನನುಗ್ರಹಿಪ ಶಿವಶಕ್ತಿ
ಗರರೆ ಬೆನ್ನುಂ ಬಸಿರುಮೊಗೆದುವೋ ಕಡೆಗಿದೇಂ
ಗಿರಿಶನಿಪ್ಪತ್ತಾರನೆಯ ಲೀಲೆಯೋ ಎಂದು ವಿಬುಧರ್ ಬಗೆಯಲೊಪ್ಪಿದಂ

ಹೊಯ್ಸಳ ಸಾಮ್ರಾಟನ ಮಂತ್ರಿಯಾಗಿದ್ದೂ ಶಿವಭಕ್ತರ ಕಿಂಕರರ ಕಿಂಕರ ತಾನೆಂದು ತಿಳಿದು ನಡೆದ ಕೆರೆಯ ಪದ್ಮರಸ `ಅಖಿಳವಸ್ತುಚಯಮಂ ಆ ಮಲಹರನ ಭಕ್ತತತಿಗಿತ್ತು ನುತಿಸುತುದ್ಧವರಿರ ನಿಮ್ಮ ಬಾಗಿಲ್ಗಾಪಿನಾಳ್ ನಿಮ್ಮ ಕೋಮಲಾಂಘ್ರಿಯ ಕೆರ್ಪುದಳೆವವಂ ನಿಮ್ಮ ಭೃತ್ಯ ತತಿಯ ಭೃತ್ಯಂ' (ಪದ್ಮರಾಜಪುರಾಣ) ಎಂದು ಭಕ್ತರ ಭಕ್ತನಾಗಿ ಭಾಳಿದ. `ನಡೆವಲ್ಲಿ ನುಡಿವಲ್ಲಿಯುಡುವಲ್ಲಿಯುಣ್ಬಲ್ಲಿ ಪೊಡರ್ವ ನಿದ್ರಾವಸ್ಥೆಯಲ್ಲಿ ದರ್ಶನದಲ್ಲಿ ಪಿಡಿವಲ್ಲಿ ಬಿಡುವಲ್ಲಿ ಕೊಡುವಲ್ಲಿ ಕೊಳ್ವಲ್ಲಿ ಯಡಸಿದುದ್ಯೋಗದಲ್ಲಿ ತೊಡುವಲ್ಲಿ ಪೊದೆವಲ್ಲಿ . . . . . ಮೃಡಮಂತ್ರವವನನಿಡಿದಡಸಿ ಬಿಡದಿರ್ಪುದೇಂ ವಶಮಾದುದೋ ಎಂಬ ಪದ್ಮರಾಜಪುರಾಣದ ಮಾತು ಪದ್ಮರಸನ ಭಕ್ತಿಯನ್ನು ತೋರುತ್ತದೆ.

ಇಂಥ ದಿವ್ಯಜೀವನವನ್ನು ನಡೆಸಿದ ಕೆರೆಯ ಪದ್ಮರಸ ಕೇವಲ ಮಂತ್ರಿಯಾಗಿ, ಕೇವಲ ಕವಿಯಾಗಿ ಉಳಿಯಲಿಲ್ಲ; ಮಹಾಭಕ್ತನಾದ, ಮಹಾಜ್ಞಾನಿಯಾದ, ಮಹಾನುಭವಿಯಾದ. ಇವನ ಕೃತಿ ದೀಕ್ಷಾಬೋಧೆಯ (ಈತನ ಸಂಸ್ಕøತ ಕೃತಿ ಸಾನಂದ ಚರಿತ್ರೆಯ ಬಗ್ಗೆ ತಿಳಿದಿಲ್ಲ) ಬರೆವಣಿಗೆಯಲ್ಲಿ ಪ್ರಸಾದವಿದೆ, ಪ್ರವಾಹವಿದೆ. ಭಕ್ತಿಯ ಆರ್ತತೆ ಆವೇಶಗಳನ್ನು ವರ್ಣಿಸುವಲ್ಲಿ ಪರತತ್ತ್ವಸ್ವರೂಪ ಹೇಳುವಲ್ಲಿ ಸಹಜ ಕವಿತೆ ಹೊಮ್ಮಿದೆ. ಅನುಭಾವಿ-ತಾತ್ವಿಕೆ ಕವಿಗಳಲ್ಲಿ ಇವನಿಗೆ ಮೇಲಾದ ಸ್ಥಾನವಿದೆ.

ಆದರೆ ಕವಿತ್ವಕ್ಕಿಂತ. ಮಂತ್ರಿತ್ವಕ್ಕಿಂತ, ವಿದ್ವತ್ತಿಗಿಂತ ಇವನ ವ್ಯಕ್ತಿತ್ವ ಹಿರಿದಾದುದೆಂದು ಹೇಳಲೇಬೇಕು. ಕೊನೆಗೆ ವಿರಾಗವಿಭುವಾಗಿ, ಮಗನಿಗೆ ಜ್ಞಾನೋಪದೇಶ ಮಾಡಿ ಹಂಪೆಗೆ ಬಂದು ಹರಿಹರನನ್ನು `ಉಮಾವರಂ ನಿಮ್ಮನಿಂದಿಗೆಂಟನೆಯ ದಿನಕೆ ತನ್ನೊಳೆ ನೆರಪಲಿರ್ದಪಂ; ಅಂತಳ್ ನೀವೀಗಳೊರೆವೀ ಮಹಾಕಾವ್ಯಮಂ ತಡೆಯ ದನಿತಳೂಳ್ ಪಾರವೈದಿಪುದು ಎಂದು ಎಚ್ಚರಿಸಿ, ಕಾಶಿಗೆ ಹೋಗಿ ವಿಶ್ವನಾಥನಲ್ಲಿ ಬೆರೆದ ಕೆರೆಯ ಪದ್ಮರಸ ಶರಣಕವಿ. ಇವನನ್ನು ಪ್ರಶಂಸಿಸಿದ ಕವಿಗಳ ಸಂಖ್ಯೆದೊಡ್ಡದು. ಅದರಲ್ಲಿ ಒಬ್ಬನಾದ ಅತಿರಸಿಕ ಕರ್ಣಾಭರಣಂ ಬುಧವರನೆಂಭ ಕವಿಹೀಗೆ ಹಾಡಿದ್ದಾನೆ:

ಲತೆಯಂ ಖಗಮಂ ಮೃಗಮಂ 
ಸತಿಯರುಮಂ ಪೊಗಳ್ ಕವಿತೆಯಂ ನೀಗದೆ ಪಾ
ರ್ವತಿಯರಸನನೇ ಪೊಗಳ್
ಕ್ಷಿತಿಯೊಳೆ ಪದ್ಮರಸ ಶರಣಕವಿ ಭವಿದೂರಂ

ಇದು ಕೆರೆಯ ಪದ್ಮರಸನ ಕಾವ್ಯೋದ್ವೇಗದಲ್ಲಿ ಕನ್ನಡಿಯಂತಿರುವ ಕಂದಪದ್ಯ. ಇವನ ಕೃತಿ ದೀಕ್ಷಾಬೋಧೆ. ಕಾವ್ಯೋದ್ವೇಗದಲ್ಲಿ ಕೃತಾರ್ಥವಾದ ಕೃತಿ. ಅನುಭಾವವನ್ನು ವಿವರಿಸುವ `ಸರ್ವಾಂಗದೊಳು ಸರ್ವಮಯನಾದ ಸದ್ಗುರುವೆ ಸರ್ವಚೇತನಕೆ ಚೇತನವಾದ ಸದ್ಗುರುವೆ-ಎಂಬ ಮಾತುಗಳೂ ಕುಲದ ಹೊಲಬು ವಿವರಿಸುವ `ಕುಲಮಂ ವಿಚಾರಿಪೊಡೆ ಸೆಲವಿಲ್ಲ ಫಲವಿಲ್ಲ. ನೆಲೆಯನಳ್ ಡಶುದ್ಧ ಹೊಲೆಯೈಸೆ ಕುಲವೆಲ್ಲ ಕಾಯಕ್ಕೆ ಕುಲವೊ ಜೀವಕ್ಕೆ ಕುಲವೊ ಪೀಳ್ ಈ ಯೆರಡರೊಳಗೆ ಇನ್ನವುದಕ್ಕೆ ಕುಲ ಪೇಳ್ ಕಾಯವಾದೊಡೆ ಶುದ್ಧ ಹೊಲೆಯಾಗಿ ಕುಲವಿಲ್ಲ ವಾಯವಹ ಜೀವ ನಿರವಯವಾಗಿ ಕುಲವಿಲ್ಲ-ಎಂಬ ಮಾತುಗಳೂ ಮಮಕಾರನಿರಸನವನ್ನು ಕುರಿತ `ಒಡವೆಯಾರದು ಒಡೆಯರಾರೆಂಬುದನು ಅರಿಯೆ ಕಡುಲೋಭಿ ಜಡನೆಯಕಟಳ್ ಲನರಗುಯೆ ಕಟ್ಟೊಡೆಯತನವ ಬಲಿದಿಂತು ಹೋರುವೆ ನೀನು ಹುಟ್ಟುವಾಗಲೆ ಧನವ ಕಟ್ಟಿತಂದೆಯೊ ನೀನು?'-ಎಂಬ ಮಾತುಗಳೂ ಪರತತ್ತ್ವ ಸ್ವರೂಪದರ್ಶನವನ್ನು ತೋರುವ `ಸಕಲನೆಂಬುದು ನಾನು ನಿಃಕಲವೆನಲು ತಾನು ಸಕಲನಿಃಕಲವೆನಿಸಿಯೆನಿಸದಿರ್ಪುದು ತಾನು ಒಳಗೆಂದೊಡಂ ತಾನು ಹೊರಗೆಂದೊಡಂ ತಾನು ಒಳಗುಹೊಗಳ್ದದ ಬಳ್ ಬೆಳಗಿನ ಬೆಳಗು ತಾನು-ಎಂಬ ಉಕ್ತಿಗಳೂ ಕೆರೆಯ ಪದ್ಮರಸನೊಬ್ಬ ಮೇಲಾದ ತಾತ್ತ್ವಿಕ ಕವಿಯೆಂಬುದನ್ನು ಸ್ಥಿರಪಡಿಸುತ್ತದೆ.	 				
(ಎಸ್.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ